ಅನುಕೂಲಣೆ

ಅನುಕೂಲ ಪಡೆವ ಆವೇಗಕ್ಕೆ (ಇಂಪಲ್ಸ್) ಸರಿಸಮನಾದ ಕೊನೆಯ ಪರಿಣಾಮವಿರುವ ಒಂದು ಆವೇಗದ ಸಾಗಣೆಯಿಂದ, ಸಾಗಿಸುವ ದಾರಿಯ ಮೇಲೆ ಆಗುವ ಅನುಕೂಲಕರ ಪ್ರಭಾವಕ್ಕೆ ನರವೈದ್ಯಶಾಸ್ತ್ರದಲ್ಲಿ ಬಳಸುವ ಪದ. ಒಂದು ನರದ ಆವೇಗ ಇನ್ನೊಂದರ ಮೇಲೆ ತೋರುವ ಈ ಅನುಕೂಲಣೆ ಒಂದಾದ ಮೇಲೆ ಇನ್ನೊಂದರಂತೆಯೋ ಒಟ್ಟಾಗಿಯೋ ಇಲ್ಲವೆ ಆಗಬಹುದು. ಒಂದು ಆವೇಗ ಒಂದು ಬಾರಿ ಸಾಗಿಹೋದ ನರಕಣಗಳ ಹಿಮ್ಮುರಿಗೆಯಲ್ಲಿ (ರಿಫ್ಲೆಕ್ಸ್) ಹೇಗೋ ಬದಲಾವಣೆ ಆಗುವುದರಿಂದ ಮುಂದಿನ ಆವೇಗಕ್ಕೆ ಅಷ್ಟೊಂದು ತಡೆಯಿರದು. ಇದರಿಂದಾಗಿ, ಗೊತ್ತಾದ ಒಂದು ಆವೇಗ ಯಾವಾಗಲೂ ನಿರ್ದಿಷ್ಟ ನರದ ದಾರಿಯಲ್ಲೇ ಮತ್ತೆ ಮತ್ತೆ ಸಾಗುವುದು. ಇನ್ನೆಲ್ಲೋ ಹುಟ್ಟಿದ ಆವೇಗಗಳು ಹಿಮ್ಮುರಿಗೆಯ ಕೇಂದ್ರಕ್ಕೆ ಬಂದು ಹಿಮ್ಮುರಿಗೆ ಮತ್ತಿತರ ನರದ ಚಟುವಟಿಕೆಯನ್ನು ಬಲಗೊಳಿಸುತ್ತವೆ. ಸಾಕಷ್ಟು ಬಲವಿಲ್ಲದ ಚೋದನೆಗಳನ್ನು (ಸ್ಟಿಮುಲಿ) ಒಟ್ಟಿಗೇ ಹಾಕಿದಾಗ ಇವೆಲ್ಲ ಒಂದೇ ದಾರಿ ಹಿಡಿದಿದ್ದರೆ, ಕಾಣುವ ಹಾಗೇ ಮರುವರ್ತನೆ ಆಗುವುದು. ನರಕಸೆಯ (ಸಿನ್ಯಾಪ್ಸ್) ಬಳಿ ಅನುಕೂಲಣೆ ಆಗಬಹುದು. ಮುಂಚೆಯೇ ಒಂದು ಆವೇಗದಿಂದ ಚೋದನೆ ಆಗಿರುವುದರ ಪರಿಣಾಮವಾಗಿ, ಒಂದು ನರದ ಸಾಗುದಾರಿಯಲ್ಲಿ ನರದ ಆವೇಗದ ಸಾಗಣೆಯಲ್ಲಿ ಇನ್ನಷ್ಟು ಸುಲಭ ಆಗಿರುವುದಕ್ಕೆ ಬಾನಂಗ್ ಎಂಬ ಜರ್ಮನ್ ಹೆಸರಿದೆ.				 
    
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ